ಗುಡ್ಡೆ ಹಳ್ಳಿ - ನಗರಸಭೆ ವ್ಯಾಪ್ತಿಯ ಕುಗ್ರಾಮ
ಕುಗ್ರಾಮಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಓದಿದ್ದೇವೆ ನೋಡಿದ್ದೇವೆ ಆದರೆ ನಗರವ್ಯಾಪ್ತಿಯಲ್ಲಿಯೂ ಕೂಡ ಕುಗ್ರಾಮಗಳಿವೆ ಎಂದರೆ ಇದೆನಪ್ಪ ಎಂದು ಆಶ್ಚರ್ಯವೆನಿಸಬಹುದು. ಇದು ವಿಚಿತ್ರವಾದರೂ ಕೂಡ ಸತ್ಯ. ಅಂತಹ ಒಂದು ಕುಗ್ರಾಮ ಕಾರವಾರ ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲಿದೆ. ಅದುವೆ ಗುಡ್ಡೆಹಳ್ಳಿ ಎಂಬ ಗ್ರಾಮ.
ಜಿಲ್ಲೆ ಹಾಗೂ ತಾಲೂಕಾ ಕೇಂದ್ರವಾದ ಕಾರವಾರ ನಗರದಿಂದ ಈ ಕುಗ್ರಾಮ ಸುಮಾರು ಎಂಟು ಕಿಮಿ ದೂರದಲ್ಲಿದೆ. ಇದು ಕಾರವಾರ ನಗರಸಭೆಯ ವಾರ್ಡ್ ನಂ. 30 ವ್ಯಾಪ್ತಿಗೆ ಸೇರಿದ್ದಾಗಿದೆ. ಹೆಸರೇ ಹೇಳುವಂತೆ ಇದು ಗುಡ್ಡದ ಪ್ರದೇಶದ ಹಳ್ಳಿ. ಹಾಗಾಗಿ ಹೆಸರು ಗುಡ್ಡೆಹಳ್ಳಿ ಸಮುದ್ರ ಮಟ್ಟದಿಂದ ಸುಮಾರು ಎರಡು ಸಾವಿರ ಅಡಿ ಎತ್ತರದಲ್ಲಿರುವ ಈ ನಗರವ್ಯಾಪ್ತಿಯ ಕುಗ್ರಾಮ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತ ಗ್ರಾಮ ಈ ಗ್ರಾಮಕ್ಕೆ ತಲುಪಲು ಕಡಿದಾದ ಕಾಲುದಾರಿಯೊಂದನ್ನು ಬಿಟ್ಟರೆ ಮತ್ತೆನಿಲ್ಲ.
ಸುಮಾರು ಐವತ್ತರಷ್ಟು ಕುಟುಂಬಗಳನ್ನು ಹೊಂದಿರುವ ಗುಡ್ಡೆಹಳ್ಳಿಯಲ್ಲಿ ಇರುವವರು ಒಂದೆ ಸಮುದಾಯದ ಅಂದರೆ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮಾಜದವರು. ಹಲವು ವರ್ಷಗಳ ಹಿಂದೆ ಇಲ್ಲಿಗೆ ಬಂದು ವಾಸ್ತವ್ಯಮಾಡಿರುವ ಈ ಕುಟುಂಬಗಳ ಮುಖ್ಯ ಜೀವನಾಧಾರ ಕೃಷಿ ಜೊತೆಗೆ ವ್ಯವಹಾರಿಕವಾಗಿ ಅಲ್ಪಸ್ವಲ್ಪ ಮರಗೆಲಸ.
ಗುಡ್ಡಳ್ಳಿಯು ಬಿಣಗಾ ಗ್ರಾಮದ ಮಜಿರೆಯಾಗಿತ್ತು. ಮೊದಲು ಗ್ರಾಮ ಪಂಚಾಯತ್ ಆಗಿದ್ದ ಬಿಣಗಾ ಗ್ರಾಮವನ್ನು ಕಾರವಾರ ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿದ ನಂತರ ಮಜಿರೆಯಾದ ಗುಡ್ಡಳ್ಳಿಯು ಕೂಡ ನಗರವ್ಯಾಪ್ತಿಗೆ ಬರುವಂತಾಯಿತು. ಮೊದಮೊದಲು ಶಿಕ್ಷಣಕ್ಕಾಗಿ ಬಿಣಗಾಕ್ಕೆ ಬರಬೇಕಿತ್ತು. ನಂತರದಲ್ಲಿ ಸರಕಾರಿ ಶಾಲೆಯನ್ನು ಗ್ರಾಮದಲ್ಲಿ ಪ್ರಾರಂಭಿಸಿದನಂತರ ಮಕ್ಕಳು ಊರಿನಲ್ಲಿಯೆ ಶಿಕ್ಷಣವನ್ನು ಪಡೆಯಲು ಸಾಧ್ಯವಾಯಿತು. ಚಿಮಣಿ ಬುಡ್ಡಿಯಲ್ಲಿ ದಿನ ಕಳೆದ ಜನತೆ ಕಳೆದ ಎಂಟು ವರ್ಷಗಳ ಹಿಂದಷ್ಟೆ ಹಳ್ಳಿಗೆ ವಿದ್ಯುತ್ ಕಾಣುವಂತಾಯಿತು. ಅದೂ ಕೂಡ ಅರಣ್ಯ ಇಲಾಖೆಯ ಹಲವು ಅಡೆತಡೆಗಳಿಂದ ಗ್ರಾಮಸ್ಥರ ಹೋರಾಟದಿಂದ ಗ್ರಾಮದಲ್ಲಿ ವಿದ್ಯುತ್ ಬೆಳಕು ಹರಿಯುವಂತಾಗಿದೆ. ಉಳಿದಂತೆ ಎನಾದರೂ ದಿನಬಳಕೆಯ ಹಿಡಿ ಉಪ್ಪು ಹಾಗೂ ಬೆಂಕಿಪೆಟ್ಟಿಗೆಯಂತಹ ವಸ್ತುಗಳು ಬೇಕೆಂದರೆ ಎಂಟು ಕಿಮಿ ಕೆಳಗೆ ಇರುವ ಬಿಣಗಾ ಇಲ್ಲವೆ ಕಾರವಾರಕ್ಕೆ ನಡೆದು ಬರಬೇಕು.
ಇಲ್ಲಿಯ ಗ್ರಾಮವಾಸಿಗಳು ಪ್ರತಿದಿನ ಕಾರವಾರಕ್ಕೆ ಕೂಲಿ ಕೆಲಸಕ್ಕೆ ಅಥವಾ ತಮ್ಮ ಇತರೆ ಕೆಲಸಕ್ಕೆ ಬರುವಾಗ ಗುಡ್ಡವನ್ನು ಯಾವುದೆ ತೊಂದರೆಯಿಲ್ಲದೆ ಅನಾಯಾಸವಾಗಿ ಹತ್ತಿಳಿಯುತ್ತಾರೆ. ಎತ್ತರದ ಗುಡ್ಡ ಪ್ರದೇಶ. ಕಡಿದಾದ ಕಾಲು ದಾರಿಯ ಏರಿಯೆ ಸಾಗಬೇಕಿರುವದರಿಂದ ಇಲ್ಲಿ ಹೊರಗಿನಿಂದ ಹೋಗುವವರಿಗೆ ಗುಡ್ಡಳ್ಳಿಯ ಪ್ರಯಾಣವೆ ಅಯೋಮಯ. ಈ ಕುಗ್ರಾಮ ನಗರ ವ್ಯಾಪ್ತಿಯ ಪ್ರದೇಶವಾಗಿರುವದರಿಂದ ಇಲ್ಲಿಯ ಜನರು ತಮ್ಮ ಆಸ್ತಿಗಳಿಗೆ ಸರಕಾರದ ಲೆಕ್ಕಾಚಾರದಂತೆ ನಗರಸಭೆಗೆ ಸ್ವಯಂಘೋಷಿತ ಆಸ್ತಿತೆರಿಗೆಯನ್ನು ನಿಯಮಿತವಾಗಿ ತುಂಬಬೇಕಾಗಿದೆ. ಆದರೆ ಸೌಲಭ್ಯ ಮಾತ್ರ ನಗರಸಭೆಯಿಂದ ಯಾವುದು ಇಲ್ಲದಾಗಿದೆ. ನ್ಯಾಯಬೆಲೆ ಅಂಗಡಿಯಿಂದ ದೊರಕುವ ವಸ್ತುಗಳನ್ನು ಪಡೆಯಲು ಎಂಟು ಕಿಮಿ ಗುಡ್ಡವನ್ನು ಹತ್ತಿಳಿದು ಬಿಣಗಾಕ್ಕೆ ಬರಬೇಕು. ವಿಧವಾ ವೇತನ, ವೃದ್ಧಾಪ್ಯ ಮುಂತಾದ ಮಾಶಾಸನ, ಅಂಚೆ ಇಲಾಖೆ, ಆರೋಗ್ಯ, ಕಂದಾಯ, ಇಲಾಖೆಯ ಸೇವೆಗಳು ಇಲ್ಲಿಯ ಗುಡ್ಡವಾಸಿ ಜನಗಳಿಗೆ ಅಂತೆ-ಕಂತೆಗಳು.
ತಾವು ಬೆಳೆದ ಭತ್ತ,ಶೇಂಗಾ,ತರಕಾರಿಯನ್ನು ತಲೆಹೊರೆಯಲ್ಲಿಯೆ ಹೊತ್ತು ತರಬೇಕು. ಊರಿನಲ್ಲಿ ಗರ್ಭೀಣಿ ಮಹಿಳೆ ಆಥವಾ ಖಾಯಿಲೆ ಬಂದ ವ್ಯಕ್ತಿಗಳಿದ್ದರೆ ಮುಗಿದೆ ಹೋಯಿತು. ಸೈಕಲ್ಲೂ ಕೂಡ ಕೊಂಡೊಯ್ಯದ ಸ್ಥಿತಿಂiÀiಲ್ಲಿರುವ ಈ ಕುಗ್ರಾಮದಿಂದ ಅವರನ್ನು ಕಂಬಳಿಯಲ್ಲಿ ಕಟ್ಟಿ ಕೆಳಕ್ಕೆ ಹೊತ್ತು ತರಬೇಕಾದ ಸ್ಥಿತಿ ಈ ಜನಗಳದ್ದಾಗಿದೆ. ಸೈಕಲ್ಲೂ ಕೂಡ ಹೋಗದಂತಹ ತೀರ ಕಡಿದಾದ ಕಾಲು ದಾರಿ. ಇಂತಹ ಅಯೋಮಯ ಸ್ಥಿತಿಯಲ್ಲಿ ಈ ಜನಗಳು ತಮ್ಮ ಬದುಕನ್ನು ಸವೆಸುತ್ತಿದ್ದಾರೆ.
ಸಂಸ್ಕøತಿ ಮರೆಯದ ಜನ : ಗುಡ್ಡಳ್ಳಿ ದಟ್ಟಾರಣ್ಯ ಪ್ರದೇಶದಲ್ಲಿದ್ದರೂ ಇಲ್ಲಿಯ ಹಾಲಕ್ಕಿ ಸಮುದಾಯದ ಜನಗಳು ಇನ್ನೂ ಕೂಡ ತಮ್ಮ ವಸ್ತ್ರವಿನ್ಯಾಸ, ಉಡುಗೆತೊಡುಗೆ ಹಾಗೂ ಹಬ್ಬಹರಿದಿನಗಳಲ್ಲಿ ತಮ್ಮ ಹಿರಿಯರಿಂದ ಬಂದಂತಹ ಸಂಪ್ರದಾಯಗಳನ್ನು ಚಾಚು ತಪ್ಪದೆ ಪಾಲಿಸುತ್ತಲೆ ಬಂದಿದ್ದಾರೆ. ಜಾನಪದ ಕಲೆಗಳಲ್ಲಿ ಒಂದಾದ ಸುಗ್ಗಿ ಕುಣಿತ, ಗುಮಟೆಪಾಂಗ್‍ಗಳನ್ನು ನಡೆಸುತ್ತಾರೆ. ಕುಗ್ರಾಮವಾದರೂ ಇಲ್ಲಿ ಮರಗೆತ್ತನೆಯ ಕಲಾಕಾರರು, ಮೂರ್ತಿ ಕಲಾಕಾರರು ಕೂಡ ಇದ್ದಾರೆ.
ಚಾರಣಕ್ಕೆ ಹೇಳಿಮಾಡಿಸಿದ ತಾಣ:ಈ ಗುಡ್ಡೆಹಳ್ಳಿಯು ಕುಗ್ರಾಮ ಎಂದು ಹೇಳಲಾದರೂ ಪ್ರವಾಸಿ ತಾಣವೂ ಹೌದು ಹಾಗೂ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳವೂ ಕೂಡ ಆಗಿದೆ. ಹಿಂದೆ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಅತಿ ಎತ್ತರದ ಸ್ಥಳ ಇದಾಗಿರುವದರಿಂದ ಪ್ರಶಾಂತ ವಾತಾವರಣಕ್ಕೆ ಮನಸೋತ ಬ್ರಿಟಿಷ್ ಅಧಿಕಾರಿಗಳು ಇಲ್ಲಿಯೆ ತಮ್ಮ ಬಂಗಲೆಯನ್ನು ಹೊಂದಿದ್ದರು, ಇಲ್ಲಿಂದ ನೋಡಿದರೆ ಸುತ್ತಲಿನ ಎಲ್ಲ ಪ್ರದೇಶಗಳು ಕಾಣುತ್ತಿತ್ತಂತೆ ಬ್ರಿಟಿಷ ಅಧಿಕಾರಿಗಳು ಇಲ್ಲಿಗೆ ಕುದುರೆಯ ಮೇಲೆ ಓಡಾಟ ನಡೆಸುತ್ತಿದ್ದರಂತೆ. ಅದಕ್ಕೆ ಕುರುಹು ಎಂಬಂತೆ ಅವರು ಬಂಗಲೆಯನ್ನು ಹೊಂದಿರುವದಕ್ಕೆ ಈಗೀರುವ ಅಡಿಪಾಯವೆ ಸಾಕ್ಷಿ ಎಂಬಂತಿದೆ.
ಜೊತೆಗೆ ಗುಡ್ಡಳ್ಳಿಯಿಂದ ಮತ್ತೆ ಎರಡು ಕಿಮಿ ಎತ್ತರದಲ್ಲಿ ಕ್ರಮಿಸಿದರೆ ವಿಶಾಲವಾದ ಕಲ್ಲುಬಂಡೆಯ ಪ್ರದೇಶವಿದೆ. ಅದರ ಮೇಲೆ ನಿಂತು ನೋಡಿದರೆ ಅಕ್ಕಪಕ್ಕದ ತಾಲೂಕಿನ ಪ್ರದೇಶಗಳು ಕಾಣುತ್ತದೆ. ಇದರ ಬುಡದಲ್ಲಿ ಪೋಲಿಸ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ನಿಸ್ತಂತು ಕೇಂದ್ರವನ್ನು ಸ್ಥಾಪಿಸಲಾಗಿದೆ. ಚಾರಣ ಪ್ರಿಯರಿಗೆ ಕಾಡಿನ ಮಧ್ಯೆ ಕಾಲು ದಾರಿಯಲ್ಲಿ ಸಾಗುತ್ತ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ. ಜೊತೆಗೆ ತಮ್ಮಲ್ಲಿರುವ ಶಕ್ತಿ ಸಾಮಥ್ರ್ಯವನ್ನು ಅಳೆದುಕೊಳ್ಳಲು ಸಾಧ್ಯ.
ಗುಡ್ಡಳ್ಳಿಯ ಎಂಟು ಕಿಮಿ ಘಟ್ಟವನ್ನು ಹತ್ತಲು ನಮ್ಮಲ್ಲಿ ಅಂತಹ ಶಕ್ತಿ ಸಾಮಥ್ರ್ಯದ ಸೊಕ್ಕುಬೇಕು. ಅಪರಿಚಿತರು ಗುಡ್ಡೆಹಳ್ಳಿ ಘಟ್ಟವನ್ನು ಹತ್ತುತ್ತೆನೆಂದು ಹೊರಟರೆ ದಾರಿ ಮಧ್ಯೆ ಹತ್ತಾರು ಬಾರಿ ಕುಳಿತೆದ್ದು ಸಾಗಬೇಕು. ಆದರೆ ಅಲ್ಲಿಯ ಜನಗಳಿಗೆ ಮಾತ್ರ ತಮ್ಮ ಊರಿನ ದಾರಿ ಓಡಾಟ ಸಲಿಸು ಎಂಬಂತಾಗಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕೂಡ ನಗರವ್ಯಾಪ್ತಿಯಲ್ಲಿಯೇ ಇಂತಹ ಕುಗ್ರಾಮಗಳಿವೆ ಎಂದರೆ ನಂಬಲು ಸಾಧ್ಯವಿಲ್ಲ ಎನ್ನುವಂತಾಗಿದೆ.
Comments
Post a Comment