ಹರಿಲಾಲ್ ಗಾಂಧಿ
ಕೃಪೆ ವಿಶ್ವವಾಣಿ ದಿನಪತ್ರಿಕೆ
ಹೆತ್ತ ತಂದೆಯೇ ತಿರಸ್ಕರಿಸಿದ್ದನ್ನು ಸಹಿಸಿಕೊಳ್ಳಲು ಹರಿಲಾಲನಿಗೆ ಆಗಲೇ ಇಲ್ಲ…!
ಮಹಾತ್ಮ ಗಾಂಧಿ ಮಗ ಹರಿಲಾಲ ಒಬ್ಬ ನತದೃಷ್ಟ. ಎಲ್ಲಾ ಇದ್ದೂ ಏನೂ ಇಲ್ಲದವನಂತಾದ ಅದೃಷ್ಟಹೀನ. ಗಾಂಧೀಜಿ ಮಗನಾಗಿ ಹುಟ್ಟಿದರೂ ಸಂಭಾವಿತನಾಗಲಿಲ್ಲ. ಗೌರವದ ಬದುಕು ಸಾಗಿಸಲಿಲ್ಲ. ಹರಿಲಾಲನಿಗೆ ‘ಗಾಂಧಿ’ ಎಂಬ ಅಡ್ಡಹೆಸರಿತ್ತು, ಆತ ಜೀವನದಲ್ಲಿ ಉದ್ಧಾರವಾಗಲು ಅದೊಂದೇ ಸಾಕಾಗಿತ್ತು. ಆದರೆ ಆತ ಅದನ್ನೂ ಉಪಯೋಗಿಸಿಕೊಳ್ಳಲಿಲ್ಲ. ಅವನ ಪ್ರಕಾರ ಅವನಿಗೆ ಅದೇ ಮುಳುವಾಯುತು. ತನ್ನೆಲ್ಲ ಹಿನ್ನಡೆಗೆ ಕಾರಣ ಎಂದು ಆತ ಬಗೆದ. ತಂದೆಯನ್ನು ಇನ್ನಿಲ್ಲದಂತೆ ಹೀಗಳೆದ. ತಂದೆಯಂಥ ಪರಮ ಸ್ವಾರ್ಥಿ ಯಾರೂ ಇಲ್ಲ ಎಂದು ಜರೆದ. ಯಾವ ತಂದೆಯನ್ನು ಇಡೀ ಜಗತ್ತು ಆರಾಧಿಸುತ್ತಿತ್ತೋ ಅದೇ ತಂದೆಯನ್ನು ಹರಿಲಾಲ ತಿರಸ್ಕರಿಸಿದ.
ಹರಿಲಾಲ ಗಾಂಧಿ ಜೀವನದ ಕತೆ ಓದುತ್ತಿದ್ದರೆ, ಎಂಥವನಿಗಾದರೂ ಎದೆ ಝಲ್ಲೆನ್ನುತ್ತದೆ. ಎಲ್ಲರಿಗೂ ಗಾಂಧಿಯಂಥ ತಂದೆ ಸಿಗುವುದಿಲ್ಲ. ಆದರೆ ಯಾರಿಗೂ ಹರಿಲಾಲನಂಥ ಮಗ ಮಾತ್ರ ಹುಟ್ಟಲೇಬಾರದು. ಹರಿಲಾಲ ಗಾಂಧಿ ಕುರಿತ ಪುಸ್ತಕ ಸಿದ್ಧಗೊಳಿಸುವಾಗ ನಾನೇ ಅನೇಕ ಕಡೆ ಬಿಕ್ಕಳಿಸಿದ್ದೇನೆ. ಮಮ್ಮಲ ಮರುಗಿದ್ದೇನೆ. ಸಂಕಟದಿಂದ ಚಡಪಡಿಸಿದ್ದೇನೆ. ಮೊದಲ ಬಾರಿಗೆ ಕನ್ನಡದಲ್ಲಿ ಗಾಂಧಿ ಮಗನ ಕಥೆ ಕಟ್ಟಿಕೊಡುತ್ತಿದ್ದೇನೆ. ಇದನ್ನು ಓದಿದರೆ ಗಾಂಧಿ ಮತ್ತಷ್ಟು ಅರ್ಥವಾಗುತ್ತಾ ಹೋಗುತ್ತಾರೆ. ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ.
ಹರಿಲಾಲನ ಬದುಕಿನ ಕೆಲವು ಪುಟಗಳನ್ನು ನಿಮಗಾಗಿ ಇಲ್ಲಿ ಎತ್ತಿ ಕೊಡುತ್ತಿದ್ದೇನೆ.
***
ಹರಿಲಾಲನ ಸಮಸ್ಯೆಗಳು ತಕ್ಷಣಕ್ಕೆ ಬಗೆಹರಿಯುವ ಯಾವ ಸೂಚನೆಗಳೂ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆತ ಮೈತುಂಬಾ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟ ತಾಳಲಾರದೇ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಗಾಂಧೀಜಿ ಮಗನೆಂದು ಸಾಲ ಕೊಡುತ್ತಿದ್ದರು. ಸಾಲ ವಾಪಸ್ ಕೇಳುವಾಗ ಹಣ ಕೊಟ್ಟವರಿಗೆ ‘ಗಾಂಧೀಜಿ ಮಗ’ ಎಂಬ ಅಂಶ ಅಡ್ಡ ಬರುತ್ತಿತ್ತು. ಹಾಗಂತ ಹಣ ಕೇಳದೇ ಇರಲು ಕೊಟ್ಟರೆ ವಾಪಸ್ ಬರುತ್ತಿರಲಿಲ್ಲ. ಕೆಲವರಂತೂ ಹರಿಲಾಲನ ಜತೆ ಹೊಡೆದಾಟಕ್ಕೆ ಇಳಿದಿದ್ದೂ ಉಂಟು. ಇನ್ನು ಕೆಲವರು ಗಾಂಧೀಜಿ ಮಗ ಎಂಬ ಕಾರಣಕ್ಕೆ ಸುಮ್ಮನಾಗುತ್ತಿದ್ದರು. ಹರಿಲಾಲನಿಗೆ ಸಾಲ ವಾಪಸ್ ಮಾಡುವ ಸ್ವಭಾವವಿರಲಿಲ್ಲ. ಜಗಳ, ವರಾತ ಮಾಡದೇ ಅವನಿಂದ ಹಣ ಪಡೆಯುವುದು ಸಾಧ್ಯವೇ ಇರಲಿಲ್ಲ. ದುಡ್ಡಿನ ವಿಷಯದಲ್ಲಿ ಅವನನ್ನು ನಂಬುವುದು ಕಷ್ಟವಾಗಿತ್ತು.
ಹರಿಲಾಲ ಅಹಮದಾಬಾದ್‌ನಲ್ಲಿದ್ದಾಗ ಪುನಃ ಹಣಕಾಸಿನ ಸಮಸ್ಯೆಗೆ ಸಿಲುಕಿದ. ಯಾರ ಹತ್ತಿರವೆಂದು ಹಣ ಕೇಳುವುದು? ಎಲ್ಲರಿಂದಲೂ ಹಣ ಪಡೆದಾಗಿದೆ. ಕೊಟ್ಟವರು ಪೀಡಿಸುತ್ತಿರುವಾಗ ಅವರ ಬಳಿ ಯಾವ ಮುಖ ಹೊತ್ತು ಹೋಗುವುದು? ಆದರೆ ಸಾಲ ಕೇಳದೇ ಬೇರೆ ದಾರಿಯೇ ಇರಲಿಲ್ಲ. ಕೈಗೆ ಕೆಲಸವಿರಲಿಲ್ಲ. ಸಂಸಾರ ಮಾತ್ರ ದೊಡ್ಡದಾಗುತ್ತಿತ್ತು. ಬೇಡಿಕೆಗಳು ಹೆಚ್ಚುತ್ತಿದ್ದವು. ಸಾಲದಿಂದಲೇ ಸಂಸಾರ ನಡೆಯಬೇಕಾದ ಪ್ರಸಂಗ ಬಂದಾಗ ಹರಿಲಾಲ ಅಧೀರನಾದ.
ಇಂಥ ಪರಿಸ್ಥಿತಿಯಲ್ಲಿ ಹರಿಲಾಲನಿಗೆ ಕೊನೆಯ ಆಸರೆಯೆಂದರೆ ತಂದೆ ಗಾಂಧೀಜಿ! ಗಾಂಧೀಜಿಗೂ ಇದು ಹೊಸತೇನಲ್ಲ. ಹಿಂದೆ ಅನೇಕ ಸಲ ಹರಿಲಾಲ ಜೋಲು ಮೋರೆ ಹಾಕಿ ಹಣಕಾಸಿನ ಸಹಾಯ ಅಪೇಕ್ಷಿಸಿ ಬಂದಾಗ ಇಲ್ಲ ಎನ್ನಲು ತಮ್ಮ ಸ್ನೇಹಿತರಿಗೆ ಹೇಳಿ ಹಣ ಕೊಡಿಸಿದ್ದರು.
ಗಾಂಧೀಜಿಯವರ ಸಮಸ್ಯೆಯೇನೆಂದರೆ ಹರಿಲಾಲ ಹಣ ಕೇಳಿದಾಗಲೆಲ್ಲ ಕೊಡಲು ಅವರ ಬಳಿಯೂ ಇರುತ್ತಿರಲಿಲ್ಲ. ಬೇರೆಯವರ ಹತ್ತಿರ ಕೇಳಿ ಕೊಡಬೇಕಾಗುತ್ತಿತ್ತು. ಇಂಥ ಸಂದರ್ಭದಲ್ಲಿ ಗಾಂಧೀಜಿಗೆ ಗಂಟಲಲ್ಲಿನ ಮಾತು ನಾಲಗೆಗೂ ಬರುತ್ತಿರಲಿಲ್ಲ. ಹಣ ಕೊಡದಿದ್ದರೆ ಹರಿಲಾಲ ರಂಪ ಮಾಡುತ್ತಿದ್ದ. ಎಲ್ಲರ ಎದುರೇ ತಂದೆಯನ್ನು ಅವಮಾನಿಸುತ್ತಿದ್ದ. ಹಣ ಕೊಡದಿದ್ದರೆ ಮಗ ಗಲಾಟೆ ಮಾಡಿ ಅವಮಾನ ಮಾಡಬಹುದೆಂಬ ಭಯ ಅವರಿಗಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಹರಿಲಾಲನ ಈ ಬೇಡಿಕೆ ಈಡೇರಿಸುವಂತೆ ಸಂಬಂಧಿಗಳಿಗೆ ಹೇಳುತ್ತಿದ್ದರು.
ಗಾಂಧೀಜಿಯವರ ಈ ದೌರ್ಬಲ್ಯವನ್ನು ಆತ ಹಣ ಕೇಳಲು ಬಳಸಿಕೊಳ್ಳುತ್ತಿದ್ದ.
ಅಂದು ಹರಿಲಾಲನಿಗೆ ಎಲ್ಲೂ ಹಣ ಹುಟ್ಟದಿದ್ದಾಗ, ಪುನಃ ಗಾಂಧೀಜಿ ಮುಂದೆ ದೈನ್ಯನಾಗಿ ನಿಂತಿದ್ದ! ಆದರೆ ಈ ಸಲ ಅವರು ಕೊಡಲೇಬಾರದೆಂದು ನಿರ್ಧರಿಸಿದ್ದರು. ಪತ್ನಿಗೂ ಸಹ ಹೇಳಿದ್ದರು. ಹರಿಲಾಲನ ಸಂಕಟ ನೋಡಲಾರದೇ ಹಣ ಕೊಡುವಂತೆ ಅಥವಾ ಸಾಲ ಕೊಡಿಸುವಂತೆ ಕಸ್ತೂರ ಬಾ, ಪತಿಯ ಮೇಲೆ ಒತ್ತಡ ಹೇರುತ್ತಿದ್ದರು. ಆಗ ಗಾಂಧೀಜಿಗೆ ಇಲ್ಲವೆನ್ನಲು ಆಗುತ್ತಿರಲಿಲ್ಲ. ಅವರಾದರೂ ಎಷ್ಟು ಸಲ ಹರಿಲಾಲನಿಗೆ ಹಣ ಕೊಟ್ಟಾರು? ಎಷ್ಟೋ ಸಲ ಸಾಧ್ಯವೇ ಇಲ್ಲವೆಂದು ಹೊರಗಟ್ಟಿದ್ದರು. ಆದರೆ ಹರಿಲಾಲ ದುಃಖಿತನಾಗಿ ಬೆನ್ನು ತಿರುಗಿಸಿ ಹೋಗುವಾಗ ಗಾಂಧೀಜಿಗೆ ಕರುಳು ಚುರ್‌ರ್ ಎನ್ನುತ್ತಿತ್ತು. ಎಷ್ಟೆಂದರೂ ಮಗ ತಾನೆ? ಕರೆದು ಹಣ ಕೊಡುತ್ತಿದ್ದರು.
ಉದ್ಯೋಗ ಗಿಟ್ಟಿಸಿಕೊಳ್ಳಲು ಹರಿಲಾಲ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದಲ್ಲ. ಅಪ್ಪನ ಮುಂದೆ ದೈನೇಸಿಯಾಗಿ ನಿಂತು ಹಣ ಕೇಳಲು ಅವನಿಗೆ ಇಷ್ಟವಿರುತ್ತಿರಲಿಲ್ಲ. ಆದರೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಬೊಗಸೆ ಹಿಡಿದು ನಿಲ್ಲುತ್ತಿದ್ದ. ಗಾಂಧೀಜಿ ಎದುರು ಹಣ ಅವನಿಗೂ ಸರಿ ಕಾಣುತ್ತಿರಲಿಲ್ಲ. ಆದರೆ ಬೇರೆ ದಾರಿಯೇ ಇರುತ್ತಿರಲಿಲ್ಲ. ಹಲವಾರು ವ್ಯಾಪಾರ ಮಾಡಿದ. ಹೇರಳ ಹಾನಿಯಾಯಿತು.
ಒಮ್ಮೆ ಮಿಠಾಯಿ ಅಂಗಡಿಯನ್ನು ತೆರೆದ. ಒಂದು ವರ್ಷ ಸಹ ನಡೆಸಲು ಆಗಲಿಲ್ಲ. ಪ್ರತಿ ಸಲ ವಿಫಲನಾದಾಗಲೂ ಆತ ಮಾನಸಿಕವಾಗಿ ವಿಪರೀತ ಬಳಲುತ್ತಿದ್ದ. ಖಿನ್ನತೆ ಅವನನ್ನು ತೀಕ್ಷ್ಣವಾಗಿ ಬಾಧಿಸುತ್ತಿತ್ತು. ಜೀವನದಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ಭಾವದಿಂದ ಪರಿತಪಿಸುವವನಂತೆ ಹಿಂಸೆ ಅನುಭವಿಸುತ್ತಿದ್ದ. ತಂದೆ ಸೂಕ್ತವಾದ ಸ್ಥಾನ ಕೊಡಿಸದಿರುವುದೇ ತನ್ನೆಲ್ಲ ಸಂಕಷ್ಟಗಳಿಗೆ ಕಾರಣ ಎಂದು ಅವನಿಗೆ ಅನಿಸುತ್ತಿತ್ತು. ವಿರುದ್ಧ ವಿಷ ಕಾರುತ್ತಿದ್ದ. ಆದರೆ ಅನ್ಯ ಮಾರ್ಗವಿಲ್ಲದೇ ತಂದೆ ಮುಂದೆ ಸಣ್ಣ ಮುಖ ಮಾಡಿ ನಿಲ್ಲುತ್ತಿದ್ದ.
ಪ್ರತಿ ಬಾರಿ ವ್ಯಾಪಾರದಲ್ಲಿ ಸೋತು ಸುಣ್ಣವಾಗಿ ಕೈಚೆಲ್ಲಿ ಕುಳಿತಾಗ, ಸಣ್ಣಪುಟ್ಟ ನೌಕರಿ, ಚಾಕರಿಗಾಗಿ ಹರಿಲಾಲ ಪ್ರಯತ್ನಿಸುತ್ತಿದ್ದ. ಅವನಿಗೆ ಅದೇ ಕೆಲಸ ಮಾಡಬೇಕು, ಇದೇ ಕೆಲಸ ಮಾಡಬೇಕೆಂಬ ಆಸೆಯೇನೂ ಇರಲಿಲ್ಲ. ಯಾವ ಕೆಲಸಕ್ಕಾದರೂ ಸಿದ್ಧನಿದ್ದ. ಆದರೆ ಅಂಥ ಕೆಲಸ ಕೊಡುವವರು ಹಾಗೆ ಯೋಚಿಸುತ್ತಿರಲಿಲ್ಲ. ‘ಹರಿಲಾಲ, ನೀನು ಗಾಂಧೀಜಿ ಮಗ. ಅವರು ಯಾರಿಗೆ ಗೊತ್ತಿಲ್ಲ? ಹೇಳಿದಂತೆ ಇಡೀ ದೇಶವೇ ಕೇಳುತ್ತದೆ. ಅವರ ಮಗನಾದ ನಿನಗೆ ನಾವು ಇಂಥ ಕೆಲಸ ಕೊಡುವುದು ಎಷ್ಟು ಸರಿ? ನೀನು ಸಹ ಇಂಥ ಕೆಲಸ ಮಾಡುವುದು ಎಷ್ಟು ಸರಿ? ಜನ ಏನೆನ್ನಬಹುದು? ಇದು ನಮಗೆ, ನಿಮಗೆ ವಿಹಿತವಲ್ಲ. ದಯವಿಟ್ಟು ತಪ್ಪು ಭಾವಿಸಬೇಡ’ ಎಂದು ಅವನನ್ನು ಸಾಗಹಾಕುತ್ತಿದ್ದರು.
ಇನ್ನು ಇದ್ದುದರಲ್ಲೇ ಸ್ವಲ್ಪ ಒಳ್ಳೆಯ ನೌಕರಿ ಬಯಸಿ ಹೋದರೆ, ‘ನೀನು ಏನು ಓದಿದ್ದೀಯಾ? ಡಿಗ್ರಿ ಆಗಿದೆಯಾ? ನಿನ್ನ ವಿದ್ಯಾರ್ಹತೆಗಳೇನು? ಯಾವ ಕ್ಲಾಸಿನಲ್ಲಿ ಪಾಸಾಗಿದ್ದೀಯಾ?’ ಕೇಳುತ್ತಿದ್ದರು. ಆಗ ಹರಿಲಾಲ ಈ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸುಮ್ಮನೆ ತಲೆ ತಗ್ಗಿಸಿ ನಿಂತಿರುತ್ತಿದ್ದ. ಆತನಿಗೆ ತನ್ನ ಅಸ್ತಿತ್ವವನ್ನೇ ಹಿಡಿದು ಅಲುಗಾಡಿಸಿದಂತೆನಿಸುತ್ತಿತ್ತು. ಸಣ್ಣಪುಟ್ಟ ಕೆಲಸಗಳಿಗೆ ಹರಿಲಾಲ ದೊಡ್ಡವ, ದೊಡ್ಡ ಕೆಲಸಗಳಿಗೆ ತೀರಾ ಸಣ್ಣವನಾಗಿಬಿಡುತ್ತಿದ್ದ. ಇದು ಅವನ ಅಸಹಾಯಕತೆ, ಹತಾಶೆ ಹಾಗೂ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು.
ಒಂದು ದಿನ ಹರಿಲಾಲ ಇಂಥದೇ ಹತಾಶ ಸ್ಥಿತಿಯಲ್ಲಿದ್ದಾಗ, ಕೊನೆ ದಾರಿ ಎಂಬಂತೆ ಗಾಂಧೀಜಿ ಮುಂದೆ ಪರದೇಶಿಯಂತೆ ನಿಂತಿದ್ದ. ಗಾಂಧೀಜಿಗೆ ಅದೆಂಥ ಕೋಪವಿತ್ತೋ ಏನೋ ಹರಿಲಾಲನನ್ನು ಕಾಣದಂತೆ ಮುಖ ತಿರುಗಿಸಿ ಹೊರಟುಹೋದರು. ವಾಪಸು ಬರಬಹುದೆಂದು ಆತ ಸುಮಾರು ಎಂಟು ತಾಸು ಕಾದು ಕುಳಿತಿದ್ದ. ಊಟಕ್ಕೆ ಸಹ ಹಣವಿರಲಿಲ್ಲ. ಉಪವಾಸದಿಂದಿದ್ದ ಹರಿಲಾಲನನ್ನು ಯಾರೋ ಊಟಕ್ಕೆ ಕರೆದಾಗ ತನ್ನ ಮೇಲೇ ಅವನಿಗೆ ಕನಿಕರ ಬಂದಂತಾಗಿ ಜೋರಾಗಿ ಅಳತೊಡಗಿದ. ಈ ಸುದ್ದಿ ಹೇಗೋ ಗಾಂಧೀಜಿಗೆ ತಿಳಿಯಿತು.
ಇಂಥ ಸಂದರ್ಭದಲ್ಲಿ ಹೋದರೆ ಹರಿಲಾಲ ಹುಚ್ಚುಚ್ಚಾಗಿ ವರ್ತಿಸಬಹುದೆಂದು ಅವರು ಹೋಗಲೇ ಇಲ್ಲ. ತಂದೆ ಬರುವ ತನಕ ಅಲ್ಲಿಂದ ಕದಲಬಾರದು ಹಾಗೂ ಏನೂ ಸೇವಿಸಬಾರದೆಂದು ಹರಿಲಾಲ ರಾತ್ರಿಯೆಲ್ಲ ಕುಳಿತೇ ಇದ್ದ. ಕೊನೆಗೂ ಗಾಂಧೀಜಿ ಮರಳಲಿಲ್ಲ. ಗಾಂಧೀಜಿ ಮಲಗುತ್ತಿದ್ದ ಕೋಣೆಯ ಮುಂಭಾಗದಲ್ಲಿ ಹರಿಲಾಲ ರಾತ್ರಿಯಿಡೀ ಬರಿ ನೆಲದ ಮೇಲೆ ನಿತ್ರಾಣನಾಗಿ ಮಲಗಿದ್ದ! ತನ್ನ ಈ ಸ್ಥಿತಿ ಕಂಡು ತಂದೆ ಬಂದೇ ಬರುತ್ತಾರೆಂಬ ಆತನ ನಿರೀಕ್ಷೆ ಮಣ್ಣುಪಾಲಾಯಿತು. ಜೀವನದಲ್ಲಿ ತಾನು ತಂದೆಯಿಂದ ಈ ಪರಿ ಅವಜ್ಞೆಗೊಳಗಾಗಬಹುದೆಂದು ಆತ ಕನಸು ಮನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಇದು ಅವನಿಗಾದ ಮರ್ಮಾಘಾತ. ಹೆತ್ತ ತಂದೆಯೇ ತನ್ನನ್ನು ಈ ರೀತಿ ನಿರ್ಲಕ್ಷಿಸಿದರೆ, ತನಗೇನೂ ಸಂಬಂಧವೇ ತಿರಸ್ಕರಿಸಿದರೆ…?
ಹರಿಲಾಲನಿಗೆ ಸಾವಿರ ಚೇಳು ಕಡಿದ ಅನುಭವ. ಜೀವನದಲ್ಲಿ ಯಾವುದನ್ನು ಬಯಸಿರಲಿಲ್ಲವೋ, ಅದು ಆಗಿಹೋಗಿತ್ತು. ಮರುದಿನ ನಿದ್ದೆಯಿಲ್ಲದ ಕಣ್ಣುಗಳಲ್ಲಿ, ಹತಾಶೆಯ ಭಾವ ಅದ್ದಿ ಭಾರವಾದ ಹೃದಯದಿಂದ ತಂದೆಗೆ ಪತ್ರ ಬರೆಯಲು ಕುಳಿತ.
ಗೌರವಾನ್ವಿತ ತಂದೆಯವರಿಗೆ,
ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇನೆ ಹಾಗೂ ನಿಮ್ಮ ಅನುಮತಿಯಂತೆ ನಿಮ್ಮಿಂದ ದೂರ ಸರಿಯುತ್ತಿದ್ದೇನೆ. ನಾವಿಬ್ಬರೂ ಹೀಗೆ ದೂರವಾಗುವುದು ವಿಧಿ ಇಚ್ಛೆಯಂತೆ ಸರಿ ಎಂದು ತೋರುತ್ತದೆ. ನಿಮ್ಮ ಜೀವನ ಸಾರ್ವಜನಿಕ. ಆದರೆ ನಿಮ್ಮ ಬದುಕು ರಹಸ್ಯ. ಹೀಗಾಗಿ ನನಗೆ ಸಂಬಂಧಿಸಿದಂತೆ ನೀವು ಅನೇಕ ಪ್ರಶ್ನೆಗಳನ್ನು ಎದುರಿಸುತ್ತಿರಬಹುದು. ಆ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ನನ್ನ ನಿಲುವನ್ನು ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ.
ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಇಂದು ನಿನ್ನೆಯದಲ್ಲ. ಅದಕ್ಕೆ ಹತ್ತು ವರ್ಷಗಳಾದವು. ನನಗೆ ಹಾಗೂ ನನ್ನ ತಮ್ಮಂದಿರಿಗೆ ಒಳ್ಳೆಯ ಶಿಕ್ಷಣ, ತರಬೇತಿ ಕೊಟ್ಟಿದ್ದೇನೆಂದು ನೀವು ಭಾವಿಸಿರಬಹುದು. ಆದರೆ ನೀವು ನಮ್ಮತ್ತ ಸ್ವಲ್ಪವೂ ಗಮನ ಹರಿಸಲಿಲ್ಲ. ಕಳೆದ ಹತ್ತು ವರ್ಷಗಳಿಂದ ನನ್ನ ದುಃಖ ದುಮ್ಮಾನಗಳನ್ನು ಮುಂದೆ ತೋಡಿಕೊಳ್ಳುತ್ತಿದ್ದೇನೆ. ಆದರೆ ನನ್ನ ಭಾವನೆಗಳಿಗೆ ನೀವು ಎಂದೂ ಸ್ಪಂದಿಸಲಿಲ್ಲ. ನೀವು ನಮ್ಮನ್ನು ಅಸ್ತ್ರಗಳಂತೆ ಬಳಸಿಕೊಂಡಿರಿ. ನೀವು ಸರ್ಕಸ್‌ನಲ್ಲಿರುವ ರಿಂಗ್ ಮಾಸ್ಟರ್, ನಾವು ಪ್ರಾಣಿಗಳು. ಎಲ್ಲ ಪ್ರಾಣಿಗಳನ್ನು ತನ್ನ ನಿಯಂತ್ರಣದಲ್ಲಿ ಸರಿಯಾಗಿ ಇಟ್ಟುಕೊಂಡಿದ್ದೇನೆಂದು ರಿಂಗ್ ಮಾಸ್ಟರ್ ತಿಳಿದುಕೊಂಡಿರುತ್ತಾನೆ. ನೀವು ನಮ್ಮ ಮೇಲೆ ಬಹಳ ನಾಜೂಕಾಗಿ ನಿಯಂತ್ರಣ ಹೊಂದಿದ್ದಿರಿ. ಯಾರೇ ಆಗಲಿ, ನೀವು ತಳೆದ ನಿಲುವಿಗೆ ಮುಗ್ಧವಾಗಿ ಭಿನ್ನ ಅಭಿಪ್ರಾಯ ಹೊಂದಿದ್ದರೆ ಅವರು ತೊಂದರೆಗೆ ಸಿಲುಕುತ್ತಿದ್ದರು.
ನೀವು ಎಂದಿಗೂ ನಮಗೆ ತೋರಿಸಲಿಲ್ಲ. ನೀವು ನಮ್ಮೊಂದಿಗೆ ಸದಾ ಸಿಟ್ಟಿನಿಂದಲೇ ಮಾತಾಡುತ್ತಿದ್ದಿರಿ. ‘ನೀನು ಮೂರ್ಖ… ಬುದ್ಧಿ ಇಲ್ಲದವನು…ನೀನು ಉದ್ಧಾರ ಆಗೊಲ್ಲ…ನೀನು ಯಾವತ್ತೂ ಸರಿಯಾಗಿ ಯೋಚಿಸುವುದಿಲ್ಲ’ ಎಂದು ನನಗೆ ಸದಾ ಬಯ್ಯುತ್ತಿದ್ದಿರಿ. ಹೀಗೆ ಬಯ್ಯುತ್ತಾ ನಮ್ಮ ಮೇಲೆ ನಿಯಂತ್ರಣ ಸಾಧಿಸಿದಿರಿ. ನಿಮ್ಮದು ಕಲ್ಲು ಹೃದಯ. ನಾನು ಎಂದಿಗೂ ನಿಮ್ಮ ಪ್ರೀತಿಯನ್ನೇ ಕಾಣಲಿಲ್ಲ. ಹೀಗಿರುವಾಗ ನಾನೇನು ಹೇಳಲಿ?
ಕಾಲಕಾಲಕ್ಕೆ ಬದಲಾದ ನಿಮ್ಮ ವಿಚಾರ, ನಿಲುವುಗಳಿಂದ ನಮ್ಮ ಜೀವನವನ್ನು ತಿರುಚಿದಿರಿ. ನಮ್ಮನ್ನು ವಿಚಿತ್ರ ಸ್ಥಿತಿಗೆ ನೂಕಿದಿರಿ. ನಮಗೆ ಶಾಣ್ಯಾತನ ಇಲ್ಲದಿರಬಹುದು- ನಿಮ್ಮ ಅನುಮತಿ ಪಡೆದು ಹೇಳುತ್ತೇನೆ- ಅದಕ್ಕೆ ಕಾರಣ ನೀವೇ. 1911ರಲ್ಲಿಯೇ ನಾನು ನಿಮ್ಮಿಂದ ದೂರವಾದೆ. ಈಗ ಪುನಃ ಅಂಥ ಸ್ಥಿತಿ ಉದ್ಭವಿಸಿದೆ. 1906ರಲ್ಲಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ.
ನನ್ನ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡೆ. ನಾನು ನಿಮ್ಮ ಮುಂದೆ ಜೋರಾಗಿ ಅತ್ತೆ, ಗಲಾಟೆ ಮಾಡಿದೆ. ಆದರೆ ನೀವು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ನಾನು ನಿಮಗೊಂದು ಅಂಶವನ್ನು ಗಮನಕ್ಕೆ ತರುತ್ತೇನೆ. ನಿಮಗೆ ಹತ್ತೊಂಬತ್ತು ನೀವೂ ಸಹ ಎಲ್ಲರ ಮಾತನ್ನು ಧಿಕ್ಕರಿಸಿ ವಿದೇಶಕ್ಕೆ ಹೋದಿರಿ.
ನೀವು ಫೀನಿಕ್‌ಸ್ನಲ್ಲಿ ಇದ್ದಾಗ, ನನ್ನ ತಾಯಿ (ಕಸ್ತೂರ ಬಾ)ಯನ್ನು ಹೇಗೆ ನಡೆಸಿಕೊಂಡಿರಿ ಎಂಬುದು ಗೊತ್ತು. ಅವರನ್ನು ನನಗಿಂತ ಹೀನಾಯವಾಗಿ ನಡೆಸಿಕೊಂಡಿರಿ. ಪ್ರತಿದಿನ ಅವರು ನಿಮ್ಮಿಂದ ಅವಮಾನಿತರಾಗುವುದನ್ನು ನಾನು ನೋಡುತ್ತಿದ್ದೆ. ಆಶ್ರಮವಾಸಿಗಳ ಮಾತು ಕೇಳಿಕೊಂಡು ನೀವು ಸಣ್ಣಪುಟ್ಟ ವಿಷಯಗಳ ಬಗ್ಗೆ ರಂಪ ರಾದ್ಧಾಂತ ಮಾಡುತ್ತಿದ್ದಿರಿ. ಒಮ್ಮೆ ಬಾ (ಕಸ್ತೂರ ಬಾ) ಹೆಚ್ಚು ಸಕ್ಕರೆ ಸೇವಿಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ ನೀವು ಮೇಲೆ ರೇಗಿದ್ದಿರಿ. ನನ್ನ ತಾಯಿ ಅನುಭವಿಸಿದಷ್ಟು ಹಿಂಸೆಯನ್ನು ತಡೆದುಕೊಳ್ಳುವಷ್ಟು ಶಕ್ತಿ ನನ್ನಲ್ಲಿ ಇಲ್ಲ.
ನಾನು ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅನೇಕ ವಿಷಯಗಳ ಕುರಿತು ಚರ್ಚಿಸಲು, ಯೋಚಿಸಲು ನನಗೆ ಸಮಯ ಸಿಗುತ್ತಿತ್ತು. ನಾನು ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ವ್ಯಕ್ತಪಡಿಸಿದಾಗ ನೀವು ಒಂದೋ ಗಮನವನ್ನೇ ಕೊಡುತ್ತಿರಲಿಲ್ಲ, ಇಲ್ಲವೇ ನನ್ನ ವಿಚಾರಗಳನ್ನು ಒಪ್ಪುತ್ತಿರಲಿಲ್ಲ. ಒಪ್ಪುವುದು ಬೇಡ, ಸರಿಯಾಗಿ ಕೇಳುವ ಉತ್ಸಾಹವನ್ನೂ ತೋರುತ್ತಿರಲಿಲ್ಲ. ನನ್ನನ್ನು ವಿರೋಧಿಸುತ್ತಿದ್ದಿರಿ.
ನನ್ನ ಸಮಸ್ಯೆಗಳನ್ನಿಟ್ಟುಕೊಂಡು ನಿಮ್ಮ ಮುಂದೆ ಬಂದಾಗಲೂ ಅವಮಾನಿಸುತ್ತಿದ್ದಿರಿ. ‘ಯಾಕೆ ನೀನು ದೃಢವಾಗಿಲ್ಲ? ನೀನೇಕೆ ಚಂಚಲ?’ ಎಂದು ಹೇಳುತ್ತಿದ್ದಿರಿ. ನನಗೆ ಈಗ ಅನಿಸುತ್ತಿದೆ. ನಾನು ದೃಢವಾಗಿದ್ದೇನೆ ಹಾಗೂ ಯಾವತ್ತೂ ಹೀಗೆ ಇರುತ್ತೇನೆ. ಇದೇ ಸ್ಥಿತಿಯಲ್ಲಿ ನಾನು ಸತ್ತುಹೋದೆ ಎಂದಿಟ್ಟುಕೊಳ್ಳಿ. ನನಗೇನೂ ಬೇಸರವಿಲ್ಲ. ಬಹಳ ಸಮಾಧಾನದಿಂದ ಸಾಯುತ್ತೇನೆ. ನಾನು ಅಂಥ ಪಾಪ ಕಾರ್ಯಗಳೇನನ್ನೂ ಮಾಡಿಲ್ಲ. ನನ್ನ ಆತ್ಮಸಾಕ್ಷಿ ಬಹಳ ಬಲವಾಗಿದೆ. ನನ್ನ ಅನ್ನವನ್ನು ನಾನೇ ದುಡಿದು ಗಳಿಸುವುದು ನನಗೆ ಅನಿವಾರ್ಯ. ಆ ದಿನ ದೂರವಿಲ್ಲ. ಆಗ ನಾನು ದೇಶಭಕ್ತನಾಗಿ ತಾಯ್ನಾಡಿನ ಸೇವೆಗೆ ಕಂಕಣಬದ್ಧನಾಗಿ ದುಡಿಯುತ್ತೇನೆ…
ಹರಿಲಾಲ ತಂದೆಗೆ ಬರೆಯುತ್ತಿದ್ದ ಪತ್ರವನ್ನು ಮುಂದುವರಿಸಿದ.
‘ನನಗೆ ಜೀವನದಲ್ಲಿ ಬ್ಯಾರಿಸ್ಟರ್ ಆಗಬೇಕೆಂದಿತ್ತು. ಇಂಗ್ಲೆಂಡ್‌ಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಬೇಕೆಂದಿತ್ತು. ಆದರೆ ನೀವು ನನ್ನ ಕೋರಿಕೆಯನ್ನು ಈಡೇರಿಸಲೇ ಇಲ್ಲ. ಸೋರಬ್ಜಿಯನ್ನು ಕಳಿಸಿದಿರಿ. ನಿಮ್ಮ ಕುಟುಂಬವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಿರಿ. ಆದರೆ ಸಣ್ಣ ಇರುವೆಯನ್ನು ಸಂತೋಷದಿಂದ ಇಡಲು ಮುತುವರ್ಜಿ ವಹಿಸಿದಿರಿ. ನಿಮಗೆ ನಿಮ್ಮ ಮಕ್ಕಳ ಹಾಗೂ ಹೆಂಡತಿಗಿಂತ ಬೇರೆಯವರ ಹೆಂಡತಿ, ಮಕ್ಕಳೇ ಮುಖ್ಯವಾದರು.
ನಿಮ್ಮ ಮನಸ್ಸಿನ ವಿರುದ್ಧ ನಾನು ಅನೇಕ ಸಲ ನನ್ನನ್ನು ಹೀಯಾಳಿಸಿದಿರಿ. ಹೌದು. ಈ ವಿಷಯದಲ್ಲಿ ನಾನು ನಿಮ್ಮ ಮಾತನ್ನು ಕೇಳಲಿಲ್ಲ. ಆದರೆ ನೀವು ಇಲ್ಲಿ ಒಂದು ಸಂಗತಿ ಗಮನಿಸಬೇಕು. ನಾನು ಮದುವೆಯಾದ ನಂತರವೂ ನಿಮ್ಮ ಜತೆಯಲ್ಲಿಯೇ ಅಡಿಯಾಳಿನಂತೆ ಇದ್ದೆ. ಪ್ರತಿಯೊಂದಕ್ಕೂ ನಿಮ್ಮನ್ನೇ ಕೇಳಬೇಕಿತ್ತು. ನನಗೆ ಯಾವುದೇ ಸ್ವಾತಂತ್ರ್ಯವೇ ಇರಲಿಲ್ಲ. ನಿಮ್ಮ ಸೇವಕನಂತೆ, ದಾಸನಂತೆ ಇದ್ದೆ. ನನಗೆ ನನ್ನದೆನ್ನುವ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಆಗಲಿಲ್ಲ. ಹಾಗಾಗುವುದಕ್ಕೆ ನೀವು ಬಿಡಲೂ ಇಲ್ಲ. ನಾನು ಸದಾ ಹಾಗೇ ಇರುವಂತೆ
‘ಸಿಹಿ ತಿಂಡಿಗಳನ್ನು ತಿನ್ನಬಾರದು, ಉಪ್ಪಿಲ್ಲದ ಆಹಾರ ಸೇವಿಸು, ತುಪ್ಪ ತಿನ್ನಬೇಡ, ಹಾಲನ್ನು ಕುಡಿಯಬೇಡ’ ಎಂದು ಹೆಜ್ಜೆ ಹೆಜ್ಜೆಗೆ ಹೇಳುತ್ತಿದ್ದಿರಿ. ಹೀಗೆ ಮಾಡುವುದರಿಂದ ಯಾವುದೇ ವ್ಯಕ್ತಿಯ ನಡತೆ, ಗುಣ, ಸ್ವಭಾವ ವೃದ್ಧಿಸುತ್ತದೆಂದು ನನಗನಿಸುತ್ತಿರಲಿಲ್ಲ. ನಾವು ಏನನ್ನು ಸೇವಿಸಬೇಕು, ಕುಡಿಯಬೇಕು ಎಂಬುದಕ್ಕೂ ನಿಮ್ಮನ್ನೇ ಕೇಳಬೇಕಿತ್ತು. ಆ ಸ್ವಾತಂತ್ರ್ಯವೂ ನಮಗಿರಲಿಲ್ಲ. ನಮಗೇನಾದರೂ ತಿಂಡಿ ತಿನ್ನುವ ಆಸೆಯಾದರೆ ಬಾ ಸುಮ್ಮನೆ ತಂದುಕೊಡುತ್ತಿದ್ದರು. ಅದು ನಿಮಗೆ ಗೊತ್ತಾದರೆ ಅವರ ಮೇಲೆ ರೇಗುತ್ತಿದ್ದಿರಿ.
ನೀವು ನಮಗಾಗಿ ಏನನ್ನೂ ನನಗೆ ದುಃಖವಾಗುವುದು ಅದಕ್ಕೇ. ನಾವು ಏನೂ ಇಲ್ಲದ ನಿರ್ಗತಿಕರು. ಜನ ನಮ್ಮನ್ನು ನೋಡಿ ನಗುತ್ತಾರೆ. ಜನ ನಮ್ಮನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ. ನಾವು ಇಲ್ಲೂ ಇಲ್ಲ, ಅಲ್ಲೂ ಇಲ್ಲ. ನೀವು ನಮ್ಮನ್ನು ಈ ಸ್ಥಿತಿಯಲ್ಲಿ ಇಟ್ಟುಬಿಟ್ಟಿರಿ.
ನಾನು ಈ ರೀತಿ ನಿಮಗೆ ಪತ್ರ ಬರೆಯುತ್ತಿರುವುದಕ್ಕೆ ಅತೀವ ದುಃಖವಾಗುತ್ತಿದೆ. ನಿಮ್ಮ ಜೀವನ ವಿಧಾನ, ಬದುಕಿನ ರೀತಿ ಅತಿ ಕಷ್ಟಕರವಾದುದು. ನಿಮ್ಮ ಬದುಕಿನ ವಿಧಾನಕ್ಕೆ ನಾನು ಒಗ್ಗಿಕೊಳ್ಳಲಾರೆ. ಪ್ರಾಯಶಃ ನಾನು ಅದಕ್ಕೆ ಯೋಗ್ಯನಲ್ಲದಿರಬಹುದು. ತಂದೆ ಹೇಳುವುದನ್ನೆಲ್ಲ ಸಹಿಸಿಕೊಳ್ಳಬೇಕು. ಆದರೆ ದುರದೃಷ್ಟವಶಾತ್ ನನಗೆ ಆ ಸಹನೆ ಇಲ್ಲ.
Comments
Post a Comment